ಕೊಂಕಣಿ ಸಾಹಿತ್ಯ

 	ಪೋರ್ಚುಗೀಸರು ಬರುವ ಮೊದಲು ಗೋವೆಯಲ್ಲಿ ಕೊಂಕಣಿ ಸಾಹಿತ್ಯ ವಿಪುಲವಾಗಿತ್ತೆಂದೂ ತಮ್ಮ ಆಕ್ರಮಣ ಕಾಲದಲ್ಲವರು ಅದನ್ನು ಸುಟ್ಟುಹಾಕಿದರೆಂದೂ ಹೇಳುವುದು ವಾಡಿಕೆ. ಇದೇ ಕಾಲದಲ್ಲಿ ಕ್ರೈಸ್ತಧರ್ಮ ಪ್ರಚಾರಕರು ಕೊಂಕಣಿಯನ್ನು ಕಲಿತುದು ಮಾತ್ರವಲ್ಲದೆ ಉಪಯುಕ್ತವಾದ ವ್ಯಾಕರಣ ಗ್ರಂಥಗಳನ್ನೂ ನಿಘಂಟುಗಳನ್ನೂ ರಚಿಸಿ ಆ ಭಾಷಾವ್ಯಾಸಂಗ ಸುಲಭ ಸಾಧ್ಯವಾಗುವಂತೆ ಮಾಡಿದರು. ಆರಂಭದಲ್ಲವರು ಸಾಹಿತ್ಯದ ಅಭಿವೃದ್ಧಿಗೆ ಕೈಹಾಕಿದಂತೆ ಕಾಣುವುದಿಲ್ಲ. ಹದಿನೇಳನೆಯ ಶತಮಾನದವರೆಗೆ ಗೋವೆಯ ಹೊರಗೂ ಕೊಂಕಣಿ ಸಾಹಿತ್ಯ ಕಂಡುಬರದೆ ಇರುವುದರಿಂದ ಅದು ಬಹಳ ಹಿಂದಿನದಲ್ಲವೆಂದು ಎಸ್.ಎಂ. ಕತ್ರೆಯವರು ಅಭಿಪ್ರಾಯಪಡುತ್ತಾರೆ. 	

	ಜಾನಪದ ಸಾಹಿತ್ಯ : ಕೊಂಕಣಿ ಹೆಚ್ಚಾಗಿ ಆಡುಮಾತಾಗಿಯೇ ಬೆಳೆದುಬಂದುದರಿಂದ ಕೊಂಕಣಿ ಸಾಹಿತ್ಯದಲ್ಲಿ ಜಾನಪದ ಸಾಹಿತ್ಯಕ್ಕೆ ಅಗ್ರಸ್ಥಾನ ಸಲ್ಲುತ್ತದೆ. ರೂಪುರೇಖೆಯಲ್ಲಿದ್ದು ಬಂಗಾಳದ ಜಾನಪದ ಸಾಹಿತ್ಯವನ್ನು ಹೋಲುವಂಥದು ಎಂದು ತಜ್ಞರ ಅಭಿಪ್ರಾಯ. ಕೊಂಕಣಿ ಜಾನಪದ ಸಾಹಿತ್ಯದಲ್ಲಿ ಹಾಡು ಮತ್ತು ನೃತ್ಯ-ನಾಟಕಗಳು ಪ್ರಸಿದ್ಧ. ಹಾಡುಗಳಲ್ಲಿ ಒವಿ, ವೇರ್ಸ್, ಜೋಗುಳದ ಹಾಡು, ಕುಣ್ಬಿ ಹಾಡು, ಮಾಂಡೊ, ಧುರ್ಪೊದ್-ಇವು ಬಹಳ ಬಳಕೆಯಲ್ಲಿವೆ. ನೃತ್ಯನಾಟಕಗಳಲ್ಲಿ eóÁಗೋರ್, ಖೆಳ್- ಇವು ಜನಪ್ರಿಯವಾಗಿವೆ.

	ಒವಿ ಎಂಬ ಛಂದಸ್ಸನ್ನು ಸೋಬಾನದ ಹಾಡುಗಳಲ್ಲಿ ಮಾತ್ರವಲ್ಲದೆ ಇತರ ಹಾಡುಗಳಲ್ಲಿಯೂ ಬಳಸುವರು. ಸಾಂಪ್ರದಾಯಿಕ ಮದುವೆ ಸಮಾರಂಭಗಳಲ್ಲಂತೂ ಇದರ ಬಳಕೆ ಅಧಿಕ: 

ಅಪ್ರೋಸಾಚಿ ವಾಟ್ಲಿ
ಕಾಂಸಕಾರನ್ ಪೆಟ್ಲಿ
ರುಜಾಯ್ ಮಾಯೇನ್ ಭೆಟ್ಲಿ
ಹೇವಿ ರೊಸಾಲಾಗಿಂ

ರಸ ತುಂಬಿದ ಬಟ್ಟಲನ್ನು ಮಾಡಿದಾತ ಕಂಚುಗಾರನಾದರೂ ರುಜಾಯಿಯಮ್ಮಳು (ಕನ್ಯಾಮರಿಯಮ್ಮಳು) ಇದನ್ನು ಆಶೀರ್ವದಿಸಿದಳು.
ಮಾಣಿಕ್ ಆನಿ ಮೊತೆಂ
ಸಿಂಪ್ಯೆಂತ್ ಆಸ್ಲೇಂ ಗುಪ್ತೆ
ಆತಾಂ ಜಾಲೆಂ ಉಗ್ತೆಂ
ದೊಗಾಂ ಆಂಕ್ವಾರಿಂಚೆಂ

	ಮುತ್ತು ಹಾಗೂ ಮಾಣಿಕ್ಯದಂತೆ ಇವರಿಬ್ಬರ ಬ್ರಹ್ಮಚರ್ಯೆ ಸಿಂಪಿನೊಳಗೆ ಗುಪ್ತವಾಗಿತ್ತು. ಈಗ ಅದು ತನ್ನ ಗೋಪ್ಯವನ್ನು ಕಳೆದುಕೊಂಡಿತು. 

	ವಧೂವರರು ಮಂಟಪದಲ್ಲಿ ಆಸೀನರಾದಾಗ ವೇರ್ಸ್ ಎಂಬ ಹಾಡುಗಳನ್ನು ಹಾಡಿ ಅವರ ಗುಣಗಾನವನ್ನೂ ಮಾಡುವುದರ ಜೊತೆಗೆ ಅವರಿಗೆ ಕೆಲವು ಹಿತೋಕ್ತಿಗಳನ್ನು ಹೇಳುತ್ತಾರೆ.

	ಏಕ್ ಸೆರ್ ತಾಂದು ಬಾಯೆ ವಾಸುಡ್ಣ್ ಕಾಡ್ಗೆ ಕುಂಡೊ
	ತುಜಾನೊವ್ರ್ಯಾಚಾ ಗುಸ್ತಾರ್ ಬಾಯೆಲೊಣ್ಯೆಂತ್ ಖಾಗೊ ಉಂಡೊ

	ಒಂದು ಸೇರು ಅಕ್ಕಿಯನ್ನು ತಕ್ಕೊಂಡು ತೌಡನ್ನು ತೆಗೆ. ನಿನ್ನ ಗಂಡನ ಜೊತೆ ಇನ್ಮುಂದೆ ಬೆಣ್ಣೆಯಲ್ಲಿಯೇ ಅದ್ದಿ ರೊಟ್ಟಿ ತಿನ್ನು.

	ಜೋಗುಳದ ಹಾಡು: ಮಗುವನ್ನು ತೊಟ್ಟಿಲಲ್ಲಿ ಹಾಕಿ ತೂಗುತ್ತಿರುವಾಗ ಹಾಡುವಂಥ ಹಾಡುಗಳಿವು. ಇವುಗಳಲ್ಲಿ ಮಮತೆಯನ್ನು ಸೂಚಿಸುವಂಥ ಶಬ್ದಗಳನ್ನೂ ವಿಚಿತ್ರ ಕಲ್ಪನೆಗಳನ್ನೂ ಅಧಿಕ ಪ್ರಮಾಣದಲ್ಲಿ ಕಾಣಬಹುದು:
ಮೊರಿಮೊೈಂ ಬಾಳಾಂತ್ ಮುಣ್
     ಸರ್ಗಾರ್ ಪಾವ್ಲಿ ಚೀಟ್
ಉಟಾ ಉಟಾ ಸೊನಾರ್ ಶೆಟಿ
 ಪಾಳ್ಣೆ ಘಡೋಂಕ್
ಮೇರಿಯಮ್ಮ ಬಾಣಂತಿ ಎಂಬ ಸುದ್ದಿ ಸ್ವರ್ಗಲೋಕಕ್ಕೆ ತಲುಪಿತು. ಆಚಾರಿಯೇ ಎದ್ದೇಳು ಬೇಗನೆ ತೊಟ್ಟಿಲನ್ನು ತಯಾರಿಸು.
ಬಾಳ್ ಆಮ್ಚೊ ಖೆಳೊಂ
ಅಂಗಾಣ್ ಆಮ್ಚೆಂ ಭೊರೊಂ
ಪೀಟಸಾರ್ಕೆಂ ಚನ್ನೆಂ
ದಾರಿಂ ಪೊಡೊಂ
ನಮ್ಮ ಮಗು ಅಂಗಳದಲ್ಲಿ ಆಡಲಿ, ಹಿಟ್ಟಿನಂಥ ಬೆಳದಿಂಗಳು ಮನೆ ಬಾಗಿಲಲ್ಲಿ ಸದಾ ಇರಲಿ.

ಘುಮ್ಟಾಂ-ಪೊದ್:
ಗುಮೊಟ್ ಎಂಬುದೊಂದು ಡೋಲು ವಿಶೇಷ. ಈ ವಾದ್ಯವನ್ನು ಬಾರಿಸಿಕೊಂಡು ಹಾಡುವ ಹಾಡುಗಳು ಹಾಸ್ಯಪ್ರಧಾನವಾದರೂ ಅವುಗಳ ಮೂಲಕ ವ್ಯಂಗ್ಯ, ಇತಿಹಾಸ, ಧಾರ್ಮಿಕ ವಿಚಾರಗಳನ್ನು ತಿಳಿಸುತ್ತಾರೆ:

ಕಸ್ತೂರಿ ಮೊಗ್ರಿ ಕಳೆ
ಮ್ಹೊಸ್ತ್ ಜಾಲ್ಯಾತ್ ಪೊಳೆ
ಚಯ್ಲಾತ್ ದಿಸ್ತಾತ್ ವೆಂಗ್ಸೆ ದೊಳೆ

 	ಕಸ್ತೂರಿ ಮಲ್ಲಿಗೆ ಮೊಗ್ಗು ಬಹಳಷ್ಟು ಇದ್ದರೂ ಕಣ್ಣಿಗೆ ಬೀಳುವುದು ಹೆಂಡತಿಯ ಮೆಳ್ಳೆಕಣ್ಣುಗಳೇ!
ಆಲ್ತೊಡ್ಚಾನ್ ಪೊಲ್ತೊಡಿ ಗೆಲ್ಯಾರಿ
ಥೈಂ ಆಸಾ ಎಕ್ಲೊ ಕುಂಪಾರಿ
ಏಕ್ ಕಟ್ಟಿ ಸೂರ್‍ಗ್ ಮಾಗ್ಲ್ಯಾರಿ
ಕಟ್ಟಿ ಘೆವ್ನ್ ಮಾಲ್ಲಿ ಬೊಡಾರಿ
ನದಿಯ ಆಚೆಯ ದಂಡೆಯಲ್ಲಿ ನನ್ನ ಕುಂಪಾರಿ-ಸಂಬಂಧಿಕನೊಬ್ಬನಿದ್ದಾನೆ. ಅಲ್ಲಿಗೆ ಹೋಗಿ ಒಂದು ಚಿಪ್ಪು ಹೆಂಡ ಕೇಳಿದಾಗ ಚಿಪ್ಪಿನಿಂದಲೇ ತಲೆಗೆ ಹೊಡೆದನಲ್ಲಾ!
ಮಾಂಡೊ: ಇದು ಪ್ರೇಮಗೀತೆ. ಇದರಲ್ಲಿ ಪ್ರಿಯತಮ ತನ್ನ ಪ್ರಿಯತಮೆಯೊಡನೆ ಅನುಭವಿಸಿದ ಸುಖಭೋಗಗಳ ವರ್ಣನೆ ಇರಬಹುದು ಅಥವಾ ವಿರಹ ತಾಪದ ಬೇಗೆಯೂ ತರಬಹುದು.  ಈ ಹಾಡುಗಳಲ್ಲಿ ಭಾವಗಳಿಗೆ ಪ್ರಾಧಾನ್ಯ. ಇವನ್ನು ಹಾಡುವಾಗ ಗುಮೊಟ್ ಎಂಬ ಡೋಲು ವಿಶೇಷವನ್ನೂ ಸಿತಾರ್ ಮೊದಲಾದ ವಾದ್ಯವಿಶೇಷಗಳನ್ನೂ ಬಳಸುವರು :

	ತುಕಾ ಪೊಳೆವ್ನರೆ ಮೊಗಾ
	ಸೊಗ್ಳೆಂ ಕಾಳಿಜ್ ಮ್ಹೊಜೆಂ ನಾಚ್ತಾಲೆಂ
	ಆತಾಂ ಕಿತ್ಯಾಕರೆ ಮೊಗಾ 	
	ಮ್ಹಾಕಾ ತುವೆಂ ಎಕ್ಸುರೆಂ ಸಾಂಡ್ಲೆಂ

	ಸೊಗ್ಯಾಳ್ಯ ಸೊಂವ್ಸಾರಾಂತ್ಲೆಂ ಸುಖ್ ಮ್ಹಾಕಾ
	ತುಜಾ ಫಾóಟ್ಲ್ಯಾನ್ ಕೊಡು ಜಾಲೆಂ
	ಜೀವ್ ಹೊ ಪಿಸೊ ಜಾಲೊರೆ ಮೊಗಾ 
	ಎಕ್ಲೆಂಚ್ ಮ್ಹಾಕಾ ಸಾಂಡ್ಲೆಂ ತುವೆಂ
	
	ರಾವ್ ಆತಾಂ ರಾವ್‍ರೆ ಮೊಗಾ
	ತುವೆಂ ಸಾಂಡ್ಲ್ಯಾರ್ ಕೊಣ್ ಅಸಾಮ್ಹಾಕಾ
	ಸೊರ್ಗಾರ್ ಸುಖ್ ಭೊಗುಂಕ್ ಮೊಗಾ
	ಮ್ಹಾಕಾ ತುಜೆಶಿಂ ವಾಂಟೊ ಆಸಾ

	ಪ್ರಿಯತಮನೇ, ನಿನ್ನನ್ನು ನೋಡಿ ನನ್ನ ಹೃದಯ ಸ್ಪಂದಿಸುತ್ತಿತ್ತು. ಆದರೂ ನನ್ನನ್ನು ಯಾತಕ್ಕಾಗಿ ಅಗಲಿಹೋದೆ?

	ನಿನ್ನಿಂದಾಗಿ ಇಹದ ಸುಖವೆಲ್ಲವೂ ನನಗೆ ಕಹಿಯಾಯಿತು. ಈ ಜೀವನವೆಲ್ಲವೂ ವ್ಯರ್ಥವಾಯಿತು. ನನ್ನನ್ನೀಗ ಒಬ್ಬಂಟಿಗಳಾಗಿ ಮಾಡಿದಿಯಲ್ಲವೇ?

	ಇನ್ನಾದರೂ ನನ್ನ ಜೊತೆಯಲ್ಲಿಯೇ ಇರು. ನೀನು ನನ್ನನಗಲಿದರೆ ನನಗೆ ಗತಿಯೇನು? ನಿನ್ನ ಜೊತೆಯಲ್ಲಿ ಸ್ವರ್ಗಾನಂದ ಪಡೆಯುವ ಭಾಗ್ಯವೂ ನನಗಿದೆ.

	ಧುಲ್ಪೊದ್ : ಇದು ಮೊಂಡೊ ಜಾತಿಯ ಹಾಡೇ ಆದರೂ ಅಷ್ಟೊಂದು ನಯನಾಜೂಕು ಇದರಲ್ಲಿಲ್ಲ. ಇದು ದ್ವಿಪದಿಯಲ್ಲಿದೆ. ಗತಿ ತೀವ್ರ. ಮಾನವ ಜೀವನ, ಗೋವೆಯ ಪ್ರಕೃತಿಸೌಂದರ್ಯ ಮೊದಲಾದ ವಿಷಯಗಳು ಈ ಹಾಡುಗಳ ವಸ್ತುಗಳು. ಕೆಲವು ಸಲ ಈ ಹಾಡುಗಳಲ್ಲಿ ಟೀಕೆಯೂ ಬರುವುದುಂಟು.

	ಪಾವ್ಸ್ ಮಾತ್ಯಾರ್ ಪಾವ್ಲೊ ವೆiÁ್ಹಜೆ ಮಾೈಂ
	ದೊರ್ಯೆ U್ಫಜೊತಾ

	ದೊರ್ಯಾ ದೆಗೆರ್ ಬೊಸೊನ್ ಮ್ಹೊಜೆ ಮಾೈಂ
	ಲ್ಹಾರಾಂ ಮೆಜಿತಾಂ

	ತ್ಯಾ ದೊರ್ಯಂತುಲ್ಯಾನ್ ಮ್ಹೊಜೆ ಮಾೈಂ
	ಏಕ್ ತಾರುಂ ವೆತಾ
	ತ್ಯಾ ತಾರ್ವಾರ್ ಬೊಸೊನ್ ಮ್ಹೊಜೆ ಮಾೈಂ
	ಪೊತಿ ಮ್ನೊಜೊಘರ್ ಯೆತಾ

	ಮಳೆ ನೆತ್ತಿಯ ಮೇಲೆಯೇ ಇದೆ ಅಮ್ಮಾ. ಸಮುದ್ರ ಗರ್ಜಿಸುತ್ತಿದೆ. ಕರಾವಳಿಯಲ್ಲಿ ನಾನು ಕೂತ್ಕೊಂಡು ತೆರೆಗಳನ್ನು ಎಣಿಸುತ್ತ ಇದ್ದೇನಮ್ಮ.

	ಆ ಸಮುದ್ರದಲ್ಲಿ ಹಡಗೊಂದು ತೇಲಿಕೊಂಡು ಬರುತ್ತಿದೆಯಮ್ಮಾ. ಅದರಲ್ಲಿ ಕೂತುಕೊಂಡು ನನ್ನ ಪತಿಯು ಬರುತ್ತಾ ಇದ್ದಾನಮ್ಮಾ!!

	ಶಾಸನ ಸಾಹಿತ್ಯ: ಕೊಂಕಣಿಯ ಉಪಲಬ್ಧಶಾಸನಗಳಲ್ಲಿ ಗೋವೆಯ ಅರವಲೆಂ ಎಂಬಲ್ಲಿ ಸಿಕ್ಕಿದ ಶಾಸನವೇ ಅತ್ಯಂತ ಪ್ರಾಚೀನವಾದುದು. ಇದರ ಕಾಲ ಕ್ರಿ.ಶ. ಎರಡನೆಯ ಶತಮಾನ. ಆಮೇಲೆ ದೊರೆತ ಶಾಸನವೆಂದರೆ ಸಿಲ್ಹಾರ ಶಾಸನ. ಇದರ ಕಾಲ ಕ್ರಿ.ಶ. ಹನ್ನೆರಡನೆಯ ಶತಮಾನ.

	ಗ್ರಂಥ ಸಾಹಿತ್ಯ: ವರ್ಣನಾಸೌಲಭ್ಯಕ್ಕೋಸ್ಕರ ಕೊಂಕಣಿ ಗ್ರಂಥಸಾಹಿತ್ಯವನ್ನು ಪ್ರಥಮ ಯುಗದ ಸಾಹಿತ್ಯ ಮತ್ತು ದ್ವಿತೀಯ ಯುಗದ ಸಾಹಿತ್ಯವೆಂದು ವಿಂಗಡಿಸಬಹುದು.

	ಪ್ರಥಮ ಯುಗದ ಸಾಹಿತ್ಯ: ಕ್ರಿ.ಶ.16ನೆಯ ಶತಮಾನದಿಂದ 19ನೆಯ ಶತಮಾನದ ಮಧ್ಯಭಾಗದವರೆಗಿನ ಸಾಹಿತ್ಯವನ್ನು ಪ್ರಥಮ ಯುಗದ ಸಾಹಿತ್ಯವೆಂದು ಕರೆಯಬಹುದು. ಇದು ಬಹುಪಾಲು ಧಾರ್ಮಿಕ ಸಾಹಿತ್ಯವೇ ಆಗಿದೆ. ಪೋರ್ಚುಗೀಸ್ ಸರ್ಕಾರ ಕೊಂಕಣಿಯನ್ನು ಕಡೆಗಂಡಿತು. ಅಲ್ಲದೆ ಕಾಲಕಾಲಕ್ಕೆ ಪರಭಾಷಾ ಆಕ್ರಮಣ ನಡೆಯುತ್ತಲೇ ಇತ್ತು. ಇಷ್ಟಾದರೂ ಜನ ತಮ್ಮ ಮನೆಮಾತಾಗಿ ಕೊಂಕಣಿ ಬಳಸುವುದನ್ನು ಬಿಡಲಿಲ್ಲ. ಅಲ್ಲದೆ ಮತಪ್ರಚಾರಕ್ಕಾಗಿ ಬಂದ ಕ್ರೈಸ್ತ ಮಿಷನರಿಗಳು ಕೊಂಕಣಿಯನ್ನು ಕೈಗೆತ್ತಿಕೊಂಡು ಪೋಷಿಸಿ ಬೆಳೆಸಿದರಾಗಿ ಕ್ರಮೇಣ ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕೆ ಪ್ರಾಶಸ್ತ್ಯ ಬಂತು.

	ಯೇಸು ಸಭೆಯ ಪೂಜ್ಯ ಥಾಮಸ್ ಸ್ಟೀವನ್ ಸ್ವಾಮಿ ತನ್ನ ಕ್ರಿಸ್ತಪುರಾಣದಲ್ಲಿ ಮೊತ್ತಮೊದಲಿಗೆ ಕೊಂಕಣಿಯನ್ನು ಮರಾಠಿಯೊಂದಿಗೆ ಹಿತಮಿತವಾಗಿ ಬೆರೆಸಿದ. ಆತನೇ ಬರೆದ ಇನ್ನೊಂದು ಕ್ರೈಸ್ತ ಧಾರ್ಮಿಕ ಗ್ರಂಥ ದೊತ್ರಿನಾ ಕ್ರಿಸ್ತಾಂ. ಇದು ಸಂಪೂರ್ಣ ಕೊಂಕಣಿ ಭಾಷೆಯಲ್ಲಿದ್ದು ಭಾರತೀಯ ಭಾಷೆಗಳಲ್ಲಿ ಮುದ್ರಿತವಾದ ಗ್ರಂಥಗಳಲ್ಲಿ ಆದ್ಯಗ್ರಂಥವಾಗಿದೆ. ಇದು ಮುದ್ರಿತವಾದ್ದು 1622ರಲ್ಲಿಯಾದರೂ ಇದರ ಹಸ್ತಪ್ರತಿಗಳನ್ನು ಅದಕ್ಕಿಂತ ಮೊದಲೇ ಬಳಸುತ್ತಿದ್ದರು. ರೋಮನ್ ಲಿಪಿಯಲ್ಲಿ ಮುದ್ರಿತವಾದ ಈ ಪುಸ್ತಕವನ್ನು ಎ.ಕೆ.ಪ್ರಿಯೊಲ್ಕರ್ ದೇವನಾಗರಿ ಲಿಪಿಗೆ ಪರಿವರ್ತಿಸಿದ. ಈ ಗ್ರಂಥವನ್ನು ಪುಣೆ ವಿಶ್ವವಿದ್ಯಾಲಯ 1966ರಲ್ಲಿ ಪ್ರಕಟಿಸಿತು.

	1632ರಲ್ಲಿ ದಿಯೊಗೊ ರಿಬೈರೊ ಎಂಬ ಸ್ವಾಮಿ ಕೊಂಕಣಿಯಲ್ಲಿ ಅನೇಕ ಧಾರ್ಮಿಕ ಗ್ರಂಥಗಳನ್ನು ಬರೆದನಲ್ಲದೆ ಅನೇಕ ಗ್ರಂಥಗಳನ್ನು ಕೊಂಕಣಿಗೆ ಭಾಷಾಂತರಿಸಿದ್ದಾನೆನ್ನಲಾಗಿದೆ. ಆದರೆ ಅವುಗಳ ಹೆಸರುಗಳು ಕೂಡ ಈಗ ಸಿಗುತ್ತಿಲ್ಲ.

	1655ರಲ್ಲಿ ಅಂತ್ರೋನಿಯೊ ಸಲ್ದಾಞ ಎಂಬಾತ ಅರ್ಚಕ ಅಂತೋನಿಯವರ ಪವಾಡಗಳು ಎಂಬ ಗ್ರಂಥದ ಮೊದಲನೆಯ ಭಾಗವನ್ನು ಕೊಂಕಣಿ ಗದ್ಯದಲ್ಲಿಯೂ ಎರಡನೆಯ ಭಾಗವನ್ನು ಮರಾಠಿ ಪದ್ಯರೂಪದಲ್ಲಿಯೂ ಬರೆದ. ಇದರ ಮೊದಲ ಭಾಗವನ್ನು 1963ರಲ್ಲಿ ಪ್ರಿಯೊಲ್ಕರ್ ಎಂಬಾತ ಸಾಂ ಅಂತೊನಿಚಿಂ ಆಚರ್ಯಾಂ ಎಂಬ ಶಿರೋನಾಮೆಯಿಟ್ಟು ರೋಮನ್ ಲಿಪಿಯಲ್ಲಿ ಮುದ್ರಿಸಿದ್ದಾನೆ.

	ಮಿಗ್ವೆಲ್ ದೆ ಅಲ್ಮೈಡಾ ಸ್ವಾಮಿ 1658-59ರ ಸುಮಾರಿಗೆ ವೊನ್ವೊಳ್ಯಾಂಚೊ ಮೊಳೊ (ಗೋವಳರ ವನ) ಎಂಬ ಚೊಚ್ಚಲು ಸಾಹಿತ್ಯಕೃತಿಯನ್ನು ಕೊಂಕಣಿಗೆ ಒದಗಿಸಿಕೊಟ್ಟ.

	1660ರಲ್ಲಿ ಜೊ ಆವೊ ದೆ ಪೆಂದ್ರೊಜಾ ಸ್ವಾಮಿ ಡಿವೈನ್ ಸಾಲಿಲೊಕ್ವೀಸ್ ಎಂಬ ಆಂಗ್ಲ ಗ್ರಂಥವನ್ನು ಕೊಂಕಣಿಗೆ ಭಾಷಾಂತರಿಸಿದ. ಈ ಕಾಲದಲ್ಲಿ ಇನ್ನೂ ಅನೇಕ ಗ್ರಂಥಗಳು ಪ್ರಕಟಗೊಂಡಿವೆ ಎಂದು ಇತರ ಗ್ರಂಥಗಳಲ್ಲಿನ ಉಲ್ಲೇಖಗಳಿಂದ ತಿಳಿದು ಬರುತ್ತದೆ.

	1684ರಲ್ಲಿ ಪೋರ್ಚುಗೀಸ್ ಸರ್ಕಾರ ಪ್ರಾದೇಶಿಕ ಭಾಷೆಗಳಲ್ಲಿ ಪುಸ್ತಕ ಪ್ರಕಟಿಸುವುದನ್ನು ಕಾನೂನುಬದ್ಧವಾಗಿ ನಿಲ್ಲಿಸಿತು.

	ದ್ವಿತೀಯ ಯುಗದ ಸಾಹಿತ್ಯ: ಪ್ರಥಮ ಯುಗದಲ್ಲಿ ಹೊರಗಿನಿಂದ ಬಂದ ಕ್ರೈಸ್ತ ಮಿಷನರಿಗಳೇ ಕೊಂಕಣಿ ಸಾಹಿತ್ಯರಂಗದಲ್ಲಿ ದುಡಿದರೆ ದ್ವಿತೀಯ ಯುಗದಲ್ಲಿ ಕೊಂಕಣಿಗರೂ ಈ ದಿಸೆಯಲ್ಲಿ ದುಡಿದರು.

	1678ರಲ್ಲಿ ಪ್ರಕಟಿತವಾದ ಫಾನ್ ರೀಡ್ಸ್‍ನ ಹೊರ್ತುಸ್ ಇಂದಿಕುಸ್ ಮಲಬಾರಿ ಕುಸ್ ಎಂಬ ಡಚ್ ಭಾಷೆಯ ಸಸ್ಯಶಾಸ್ತ್ರ ಗ್ರಂಥದ ಪ್ರಸ್ತಾವನೆಯಲ್ಲಿ ನಾಗರಿಲಿಪಿಯನ್ನು ಬಳಸಿ ಕೊಂಕಣಿಯಲ್ಲಿ ಬರೆಯುತ್ತಿದ್ದುದಕ್ಕೆ ಪ್ರಮಾಣ ಸಿಕ್ಕುತ್ತದೆ. ಇದನ್ನು ಬರೆದವರು ಕೊಚ್ಚಿ ಪ್ರದೇಶದ ಆಯುರ್ವೇದ ಚಿಕಿತ್ಸಕರಾದ ಅಪ್ಪುಭಟ್ಟ, ವಿನಾಯಕ ಪಂಡಿತ ಮತ್ತು ರಂಗಭಟ್ಟರು.

	1808ರಲ್ಲಿ ವಿಲಿಯಂ ಕ್ಯಾರಿ (1761-1834) ಬೈಬಲನ್ನು ಕೊಂಕಣಿಗೆ ಭಾಷಾಂತರಿಸಿದ. ಇದೂ ದೇವನಾಗರಿ ಲಿಪಿಯಲ್ಲಿದೆ. ಡಚ್ಚರ ಕಾಲದಲ್ಲಿ ಕೇರಳದಲ್ಲಿ ಕೊಂಕಣಿಗೆ ಮಾನ್ಯತೆಯಿದ್ದಿರಬೇಕು. ಎರ್ನಾಕುಲಮಿನಲ್ಲಿನ ಸಾರ್ವಜನಿಕ ಪತ್ರಾಗಾರದಲ್ಲಿನ ಅನೇಕ ಕೊಂಕಣಿ ದಸ್ತಾವೇಜುಗಳೇ ಇದಕ್ಕೆ ಆಧಾರ.

	ಗೋವೆಯ ರವೀಂದ್ರ ಕೇಳ್ಕರ್ ಅವರು ಎಫ್.ಜೆ. ಮಾರ್ತಿರೆಸ್ ಹಾಗೂ ಎ.ಎ.ಸಲ್ದಾಞ-ಇವರ ಸಹಾಯದಿಂದ 2,000ಕ್ಕೂ ಮಿಕ್ಕಿದ ಕೊಂಕಣಿ ಗ್ರಂಥಗಳ ವಿವರಣ ಪಟ್ಟಿಯೊಂದನ್ನು ತಯಾರಿಸಿದ್ದಾರೆ.

	ಪ್ರಪ್ರಥಮ ಕೊಂಕಣಿ ವ್ಯಾಕರಣ ಗ್ರಂಥ 1640ರಲ್ಲಿ ಗೋವೆಯ ರಾಯ್ತೂರಿನಲ್ಲಿ (ರಷೋಲ್) ಪ್ರಕಟವಾಯಿತು. ಇದನ್ನು ಬರೆದಾತ ಯೇಸು ಸಭೆಯ ಥಾಮಸ್ ಸ್ಟೀವನ್ ಸ್ವಾಮಿ. ಈಗ ಕೊಂಕಣಿಯ ಬಗ್ಗೆ ಸುಮಾರು 19 ವ್ಯಾಕರಣಗಳೂ 24 ನಿಘಂಟುಗಳೂ ಇವೆ. ಇವುಗಳಲ್ಲಿ ಯೇಸು ಸಭೆಯ ಎ.ಎಫ್. ಎಕ್ಸ್‍ಮಾಫೆ ಸ್ವಾಮಿಯ ಕೊಂಕಣಿ ವ್ಯಾಕರಣ (1882), ಇಂಗ್ಲಿಷ್-ಕೊಂಕಣಿ, ಕೊಂಕಣಿ-ಇಂಗ್ಲಿಷ್ ನಿಘಂಟು (1883) ಇನ್ನೂ ಬಳಕೆಯಲ್ಲಿವೆ.

	ಇತ್ತೀಚೆಗೆ ಪೋರ್ಚುಗಲ್ಲಿನ ಬ್ರಾಗದಲ್ಲಿಯ ಸಾರ್ವಜನಿಕ ಗ್ರಂಥಾಲಯದಲ್ಲಿ ಕೊಂಕಣಿ ಸಾಹಿತ್ಯ ಗ್ರಂಥವೊಂದು ಸಿಕ್ಕಿದೆ. ಇದು ಹಸ್ತಪ್ರತಿರೂಪದಲ್ಲಿದೆ. ಈ ಗ್ರಂಥದಲ್ಲಿ ಮಹಾಭಾರತ ಮತ್ತು ರಾಮಾಯಣಗಳಿಂದ ಆರಿಸಿದ ಕೆಲವು ಕಥೆಗಳಿವೆ. ಈ ಕೃತಿಯನ್ನು ಬರೆದಾತ 16ನೆಯ ಶತಮಾನದಲ್ಲಿ ಗೋವೆಯಲ್ಲಿ ಬಾಳಿದ ಕೊಂಕಣಿ ಕವಿ ಕೃಷ್ಣದಾಸ ಶರ್ಮ ಎಂದು ಅಭಿಪ್ರಾಯಪಡುತ್ತಾರೆ. ಈ ಕೃತಿಯ ಶೈಲಿಯನ್ನು ಪರೀಕ್ಷಿಸಿದಾಗ ಇದಕ್ಕಿಂತಲೂ ಪೂರ್ವದಲ್ಲಿ ಕೊಂಕಣಿ ಸಾಹಿತ್ಯ ಹುಟ್ಟಿ ಹುಲುಸಾಗಿ ಬೆಳೆದಿರಬೇಕೆಂದು ಖಚಿತವಾಗುತ್ತದೆ. ಈ ಕೃತಿಯ ಸೂಕ್ಷ್ಮ ಛಾಯಾಚಿತ್ರ (ಮೈಕ್ರೊ ಫಿಲ್ಮ್) ಪಣಜಿಯ ಕೇಂದ್ರ ಗ್ರಂಥಾಲಯದಲ್ಲಿದೆ.

	ಪ್ರಸ್ತುತ ಕಾಲ ಕೊಂಕಣಿ ಸಾಹಿತ್ಯದ ನವೋದಯದ ಕಾಲ. ಕೊಂಕಣಿ ಸಾಹಿತ್ಯ ಇಂದು ಬಹುಮುಖವಾಗಿ ಬೆಳೆಯುತ್ತಿದೆ. ಶೆಣೈಗೊಯೆಂಬಾಬ್ ಆಧುನಿಕ ಕೊಂಕಣಿ ಸಾಹಿತ್ಯದ ಪಿತನೆಂದು ಹೆಸರು ಪಡೆದಿದ್ದಾರೆ. ನಾಟಕ, ಸಣ್ಣಕಥೆ, ಜೀವನಚರಿತ್ರೆ, ದಾರ್ಶನಿಕ ಹಾಗೂ ಸಂಶೋಧನಾ ಗ್ರಂಥಗಳು, ವ್ಯಾಕರಣ, ಮಕ್ಕಳ ಸಾಹಿತ್ಯ ಹಾಗೂ ಇನ್ನಿತರ ರಂಗಗಳಲ್ಲಿ ಒಳ್ಳೆಯ ಸಾಹಿತ್ಯ ಕೃತಿಗಳನ್ನಿವರು ರಚಿಸಿದ್ದಾರೆ. ಇವರಿಂದಲೇ ಕೊಂಕಣಿ ಪುನರುಜ್ಜೀವನಗೊಂಡಿತೆಂದರೆ ತಪ್ಪಾಗದು.

	ರಾಮಚಂದ್ರ ಎಸ್.ನಾಯಕ್, ರವೀಂದ್ರ ಕೇಳ್ಕರ್, ಜೊಕಿಂ ಅಂತೊನಿಯೊ ಫೆರ್ನಾಂಡಿಸ್, ಫೆಲಿಚಿಯೊ ಕಾರ್ಡೊಜೊ, ಎವಾಗ್ರಿಯೊ ಜಾರ್ಜ್, ಗುರುನಾಥ ಕೇಳ್ಕರ್, ಚಂದ್ರನಾಥ ಕಿಣಿ, ದಿನಕರ ದೇಸಾಯಿ, ಜೆ.ಬಿ. ಮೊರಾಯಸ್, ಬೈಂದೂರು ದೇವೊರಾಯ್, ಡಾ.ಮನೋಹರ್ ಸರ್ದೇಸಾಯಿ ಮೊದಲಾದವರ ಕಾವ್ಯಗಳು ಭಾವಗೀತ ಸ್ವರೂಪದ್ದಾಗಿವೆ. ಪ್ರೇಮ, ಪ್ರಕೃತಿ ಸೌಂದರ್ಯ, ದೇಶಭಕ್ತಿ ಮೊದಲಾದುವನ್ನು ಕಾವ್ಯವಸ್ತುವನ್ನಾಗಿ ಆರಿಸಿ ಲಾಲಿತ್ಯಮಯ ಭಾವಗೀತೆಗಳನ್ನಿವರು ಬರೆದಿದ್ದಾರೆ.

	ಕಾರವಾರದ ವಿ.ಆರ್.ಪ್ರಭು, ಧಾರವಾಡದ ವಿಜಯ ನಾಡಕರ್ಣಿ, ಪ್ರಭಾನಂದ ಸ್ವಾಮಿ, ಕೆ.ವಿ.ಗುಲ್ವಾಡಿ, ಗಿರೀಶ ಕಾರ್ನಾಡ್ ಮೊದಲಾದವರು ಕೊಂಕಣಿ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ದುಡಿದಿದ್ದಾರೆ, ದುಡಿಯುತ್ತಿದ್ದಾರೆ.

	ಕೇರಳದ ಶ್ರೀಮತಿ ಕಮಲಮ್ಮಳ್ ಅಂಬಾಲಾಪು¾-ಇವರು ಸಂಪೂರ್ಣ ರಾಮಾಯಣವನ್ನು ಸೋಬಾನೆ ರೂಪದಲ್ಲಿ ರಚಿಸಿದ್ದಾರೆ. ಎಲ್. ನಾರಾಯಣ್ ಮಲ್ಯ, ಎಮ್.ಉಪೇಂದ್ರ ಪೈ, ರಂಗನಾಥ ಪ್ರಭು ಮೊದಲಾದವರು ನಾಟಕ, ಕವನ, ಹಾಡು ಇತ್ಯಾದಿ ಸಾಹಿತ್ಯ ರೂಪಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.

	ದಕ್ಷಿಣ ಕನ್ನಡ ಜಿಲ್ಲೆಯ ಬೊಳಂತೂರು ಕೃಷ್ಣಪ್ರಭು, ಬಂಗಳೇಕರ್ ನಾರಾಯಣ ಕಾಮತ್, ಪುಂಡಲೀಕ ಶೆಣೈ, ಬಿ.ವಿ. ಬಾಳಿಗ, ಜಿ.ಎನ್. ಲಕ್ಷ್ಮಣ ಪೈ-ಇವರು ಕೊಂಕಣಿ ಸಾಹಿತ್ಯಕ್ಕೆ ಅನೇಕ ಕೃತಿಗಳನ್ನು ನೀಡಿದ್ದಾರೆ. ಜೊಕಿಂ ಸಂತಾನ್ ಆಲ್ವಾರಿಸ್ ಮತ್ತು ಖಡಾಪ್-ಇವರ ಸಾಮಾಜಿಕ ಕಾದಂಬರಿಗಳು ಕೊಂಕಣಿ ಸಾಹಿತ್ಯದ ಕೃತಿ ರತ್ನಗಳಾಗಿವೆ.

	ಚಾ.ಫ್ರಾ.ಡಿಕೊಸ್ತ, ಸಿರಿವಂತ್, ವಾಸು, ಪಾವುಸ್ತೀನ್ ಡಿಸೋಜ, ಗಬ್ಬು, ಐರಿನ್ ಪಿಂಟೊ ಮೊದಲಾದವರು ಸಣ್ಣಕಥೆಯ ಕ್ಷೇತ್ರವನ್ನು ಚೆನ್ನಾಗಿ ಬೆಳೆಸಿದ್ದಾರೆ. 

	ಜೆರೂಮ್ ಡಿಸೋಜ, ವಿಲ್ಫಿ ರೆಬಿಂಬಸ್ ಮೊದಲಾದವರು ನಾಟಕ, ಹಾಡು, ಗೀತೆಗಳಲ್ಲಿ ಪ್ರಸಿದ್ಧಿಪಡೆದಿದ್ದಾರೆ. ವಿಲ್ಫಿ ರೆಬಿಂಬಸ್‍ಗೆ ಕೊಂಕಣದ ಕೋಗಿಲೆ ಎಂಬ ಅಪೂರ್ವ ಬಿರುದಿದೆ.

	ಕಾವ್ಯದಾಸ್, ಮರಿಯಾದಾಸ್, ರಾನ್, ಫೆಲಿಕ್ಸ್-ಡಾರ್ಜಿಲಿಂಗ್-ಮೊದಲಾದವರು ಕೊಂಕಣಿ ಗೀತೆಗಳನ್ನು ರಚಿಸಿ ಖ್ಯಾತರಾಗಿದ್ದಾರೆ.

	ಸರ್ದಾರ್ ಎಲ್.ಸಿ.ಪಾಯ್ಸ್, ಮಾರ್ಕ್ ವಾಲ್ಡಾರ್, ವಿಲ್ಯಮ್ ಮಾಡ್ತಾ, ಜೆ.ನೊರೊನ್ನ ಮೊದಲಾದವರು ವೈಚಾರಿಕ, ದಾರ್ಶನಿಕ, ವೈಯಾಕರಣಿಕ, ಧಾರ್ಮಿಕ ಲೇಖನಗಳನ್ನು ಬರೆದು ಕೊಂಕಣಿ ಸಾಹಿತ್ಯ ಬಹುಮುಖವಾಗಿ ಬೆಳೆಯುವಂತೆ ದುಡಿಯುತ್ತಿದ್ದಾರೆ.

	ಲಘುಹಾಸ್ಯದಲ್ಲಿ ಪಿಡ್ವಾಜ್ ಜನಮೆಚ್ಚುಗೆಯನ್ನು ಪಡೆದಿದ್ದಾರೆ. ಮೊನಿಞÉೂೀರ್ ಸಿಲ್ವೆಸ್ತರ್ ಮಿನೇಜಸ್, ಮೊ.ಆರ್.ಮಸ್ಕರೇಞಸ್-ಇವರು ಇತ್ತೀಚೆಗೆ ಕನ್ನಡ ಲಿಪಿಯನ್ನು ಬಳಸಿ ಬೈಬಲ್ಲಿನ ಹೊಸ ಒಡಂಬಡಿಕೆಯನ್ನು ಕೊಂಕಣಿಗೆ ಕೊಟ್ಟಿದ್ದಾರೆ. ಅಲ್ಲದೆ ಹಲವಾರು ಭಕ್ತಿಗೀತೆಗಳನ್ನು ರಚಿಸಿದ್ದಾರೆ.

	ಕೊಂಕಣಿ ಪತ್ರಿಕಾ ಸಾಹಿತ್ಯ: ಮುಂಬಯಿಯ ಆರ್ಯೇಸ್ ಫೆರ್ನಾಂಡಿಸ್ ಸ್ವಾಮಿ ಕೊಂಕಣಿ ಪತ್ರಿಕೆಗಳ ವಿವರಣ ಪಟ್ಟಿಯೊಂದನ್ನು ತಯಾರಿಸಿದ್ದಾರೆ. ದಿವ್ಟಿ (ದೈನಿಕ, ರೋಮನ್ ಲಿಪಿ), ವಾವ್ರಾತ್ಯಾಂಚೊ ಈಸ್ಟ್ (ವಾರಪತ್ರಿಕೆ, ರೋಮನ್ ಲಿಪಿ), ರಾಕ್ಣೊ, ಕಾಣಿಕ್, ಪಯ್ಣರಿ, ಮಿತ್ರ್, ಸೆವಕ್, ಪಂಚ್ಕಾದಾಯಿ ಇತ್ಯಾದಿ (ಕನ್ನಡ ಲಿಪಿಯಲ್ಲಿನ ವಾರಪತ್ರಿಕೆಗಳು); ನೊವೆಂ ಗೊಂಯ್ (ಅರ್ಧ ಮಾಸಿಕ, ದೇವನಾಗರಿ ಲಿಪಿ), ಝೆಲೊ (ಅರ್ಧಮಾಸಿಕ, ಕನ್ನಡ ಲಿಪಿ), ಜೆಜುರಾಯ್, ಆಮ್ಚಿಮಾಯ್, ಆಂಜ್ (ಕನ್ನಡ ಲಿಪಿ), ಸಾರಸ್ವತ ವಾಣಿ (ಮಲಯಾಳಂ ಲಿಪಿ), ಗೊಮಾಂತ ಭಾರತಿ (ರೋಮನ್ ಲಿಪಿ), ಕೊಂಕಣಿ ಭಾರತಿ (ದೇವನಾಗರಿ ಲಿಪಿ)-ಮೊದಲಾದ ಮಾಸಿಕ ಪತ್ರಿಕೆಗಳು ಮುಖ್ಯವಾದುವು. ಕೊಂಕಣಿಯಲ್ಲಿ ವಾರ್ತಾಪತ್ರಿಕೆ ಆರಂಭವಾದದ್ದು 1889ರಲ್ಲಿ.

	ಭಾಷಾಂತರ ಸಾಹಿತ್ಯ: ಭಾಷಾಂತರಿಸಿದ ಕೃತಿಗಳಲ್ಲಿ ಬೈಬಲ್ಲು ಮತ್ತು ವಿನೋಬಾ ಭಾವೆಯವರ ಗೀತಾಪ್ರವಚನ-ಇವು ಮೇರುಕೃತಿಗಳಾಗಿವೆ. ಸಣ್ಣಕಥೆ, ನಾಟಕ ಮಾತ್ರವಲ್ಲದೆ ಕಾದಂಬರಿಗಳನ್ನೂ ಪರಕೀಯ ಭಾಷೆಗಳಿಂದ ಕೊಂಕಣಿಗೆ ಭಾಷಾಂತರಿಸಲಾಗಿದೆ. ಷೇಕ್ಸ್‍ಪಿಯರನ ನಾಟಕಗಳನ್ನು ತರ್ಜುಮೆಗೊಳಿಸಿ ರಂಗಮಂಟಪದಲ್ಲಿ ಅಲ್ಲಲ್ಲಿ ಆಡಿ ತೋರಿಸಿದ್ದಾರೆ. ಗಾಂಧೀಸಾಹಿತ್ಯವನ್ನು ಕೊಂಕಣಿಗೆ ತಂದವರಲ್ಲಿ ಆರ್.ಎನ್.ನಾಯಕ್ ಹಾಗೂ ರವೀಂದ್ರ ಕೇಳ್ಕರ್ ಪ್ರಸಿದ್ಧರು.

	ಆಕಾಶವಾಣಿಯ ಮೂಲಕವೂ ಕೊಂಕಣಿ ಸಾಹಿತ್ಯ ತನ್ನ ಕಂಪನ್ನು ಬೀರುತ್ತಿದೆ. ಕೊಂಕಣಿ ಹಾಡು, ಕಥೆ, ನಾಟಕ, ಪ್ರಾಂತೀಯ ಸಮಾಚಾರ, ರೈತವಿಭಾಗ, ಇವುಗಳ ಮೂಲಕ ಕೊಂಕಣಿ ಸಾಹಿತ್ಯ, ಸಂಸ್ಕøತಿಗಳಲ್ಲದೆ ಉಪಯುಕ್ತ ವಿಚಾರ, ಮಾಹಿತಿ-ಮುಂತಾದವು ಅಖಿಲಭಾರತ ಆಕಾಶವಾಣಿ-ಮುಂಬಯಿ, ಧಾರವಾಡ, ದೆಹಲಿ ಹಾಗೂ ಪಣಜಿಗಳಿಂದಲೂ ಪೋರ್ಚುಗಲ್ಲಿನ ಲಿಸ್ಬನಿನಿಂದಲೂ ಪ್ರಸಾರಗೊಳ್ಳುತ್ತಿವೆ. ಕೊಂಕಣಿಯಲ್ಲಿ ನಾಲ್ಕೈದು ಚಲನಚಿತ್ರಗಳು ತಯಾರಾಗಿ ಜನಪ್ರಿಯವಾಗಿವೆ.

	ಗೋವೆಯಲ್ಲಿ ಹಾಗೂ ಕೇರಳದಲ್ಲಿ ಕೊಂಕಣಿ ಮಾಧ್ಯಮದಲ್ಲಿ ಶಿಕ್ಷಣ ಇರುವುದರಿಂದಲೂ ಮಂಗಳೂರಿನಲ್ಲಿ ಡಾ.ಅಲೆಕ್ಸಾಂಡರ್ ಡಿ'ಸೋಜಾ ಸ್ವಾಮಿಗಳ ಪರಿಶ್ರಮದಿಂದ ಕೊಂಕಣಿ ಬೇಸಗೆ ಶಿಖರ ನಡೆಯುವುದರಿಂದಲೂ ಕೊಂಕಣಿಯಲ್ಲಿ ಪಠ್ಯಪುಸ್ತಕಗಳು ಸಿದ್ಧವಾಗಿ ಪ್ರಕಟವಾಗುತ್ತಿವೆ.

	ಕೊಂಕಣಿ ಭಾರತದ ಹೊರಗೂ ಜನಮನವನ್ನು ಸೆಳೆಯುತ್ತಿದೆ. ಅಮೆರಿಕೆಯ ಕಾರ್ನೆಲ್ ವಿಶ್ವವಿದ್ಯಾಲಯದಲ್ಲೂ ಪೋರ್ಚುಗಲ್ಲಿನ ಲಿಸ್ಬನ್ ವಿಶ್ವವಿದ್ಯಾಲಯದಲ್ಲೂ ಕೊಂಕಣಿ ಅಧ್ಯಯನ ಹಾಗೂ ಅಧ್ಯಾಪನಗಳು ನಡೆಯುತ್ತಿವೆ. ಕೇರಳದ ಕೊಂಕಣಿ ಭಾಷಾಪ್ರಚಾರಸಭಾ, ಗೋವೆಯ ಕೊಂಕಣಿ ಭಾಷಾಮಂಡಳಿ, ಕೊಂಕಣಿ ಅಭ್ಯಾಸ ಕೇಂದ್ರ ಮತ್ತು ಕೊಂಕಣಿ ಬರೆಹಗಾರರ ಸಂಘ-ಇವುಗಳ ಮೂಲಕ ಕೊಂಕಣಿ ಭಾಷೆ ಹಾಗೂ ಸಾಹಿತ್ಯದ ಕೃಷಿ ದಿನೇ ದಿನೇ ಬೆಳೆಯುತ್ತಿದೆ.
(ಡಬ್ಲ್ಯು.ಎಂ.)